ಪರಿಕಲ್ಪನೆ :
ನುಡಿದರೆ ಮುತ್ತಿನ ಹಾರದಂತಿರಬೇಕು. ಕುಡಿದರೆ ಮತ್ತೇರುವಂತಿರಬೇಕು ಎಂಬ ನಾಣ್ಣುಡಿಯಂತೆ ಈ ಆಧುನಿಕ ಯುಗದಲ್ಲಿ ಕಾಲದ ಪ್ರಜ್ಞೆ ಇಲ್ಲದವರಿಗೆ ಗಡಿಯಾರ ಬರೀ ಅಲಂಕಾರಕ್ಕಷ್ಟೇ ಎಂಬಂತೆ 84 ಲಕ್ಷ ಜೀವರಾಶಿಗಳಲ್ಲಿ ಸುಜ್ಞಾನ ಮತ್ತು ವಿವೇಕ ಹೊಂದಿರುವ ಮಾನವ ಇಂದು ಮಾದಕ ವಸ್ತುಗಳ ಸೇವನೆ, ಧೂಮಪಾನ ಹಾಗೂ ಮಧ್ಯಪಾನ ಸೇವನೆಯು ಫ್ಯಾಷನ್, ಅಂತಸ್ತು ಹಾಗೂ ಪ್ರತಿಷ್ಠೆಯೆಂದು ಭಾವಿಸಿ ತಮ್ಮ ಜೀವನ ಮತ್ತು ಜೀವವನ್ನು ನಶ್ವರವಾಗಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ನೈತಿಕವಾಗಿ ಅಧಃಪತನದ ಕಡೆಗೆ ಸಾಗುವ ನಾಗರೀಕರಿಗೆ, ವಿಶೇಷವಾಗಿ ಯುವಕರಿಗೆ ಸದರಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯಕರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಆಪ್ತ ಸಮಾಲೋಚನೆ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಲು ಜಾಗೃತಿ ಮೂಡಿಸಿ ಕುಟುಂಬದೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮದ ಅಂಗಸಂಸ್ಥೆಯೇ “ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ.“
ಗುರಿ ಮತ್ತು ಉದ್ದೇಶಗಳು :
- ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂಬ ಪುರಂದರದಾಸರ ವಾಣಿಯಂತೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
- ಕ್ಷುಲ್ಲಕ, ಕ್ಷಣಿಕ ಸಂತೋಷಕ್ಕಾಗಿ ಚಟಗಳಿಗೆ ದಾಸರಾಗುವುದನ್ನು ನಿಯಂತ್ರಿಸುವುದು..
- ಮಧ್ಯವರ್ಜನ ಶಿಬಿರಗಳ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವುದು..
- ಮಾದಕ ಹಾಗೂ ಮಧ್ಯಪಾನ ಸೇವನೆಯಿಂದ ಉಂಟಾಗುವ ಹೃದ್ರೋಗ, ನರಗಳ ದೌರ್ಬಲ್ಯ, ಮತಿಭ್ರಮಣೆ, ಕಣ್ಣಿನ ತೊಂದರೆ, ಸ್ಮರಣಶಕ್ತಿ ಕುಂದುವುದು, ದೈಹಿಕ ಸೆಳೆತ(ನಡುಕ) ನಿದ್ರಾಹೀನತೆ ಇತ್ಯಾದಿ ಪರಿಣಾಮಗಳ ಕುರಿತು ತಿಳುವಳಿಕೆ ನೀಡುವುದು..
ಆಯ್ಕೆ ಪ್ರಕ್ರಿಯೆ :
ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವ್ಯಸನಿಯನ್ನು ವೈಯಕ್ತಿಕ ಹಾಗೂ ಕೌಟುಂಬಿಕ ಸಮಾಲೋಚನೆ ಮಾಡಿ, ವ್ಯಸನಿಯ ಸ್ವಇಚ್ಛೆಗೆ ಅನುಗುಣವಾಗಿ, ವೈದ್ಯರ ತಪಾಸಣೆಯ ಆಧಾರದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಒಂದು ವೇಳೆ ವ್ಯಸನಿಯು ಚಿಕಿತ್ಸೆಗೆ ನಿರಾಕರಿಸಿದರೆ ಮನವೊಲಿಸಿ ದಾಖಲಿಸಿಕೊಳ್ಳಲಾಗುವುದು.
ದಾಖಲಾತಿಗಳ ಮೂಲಗಳು :
- ಕುಟುಂಬ ವರ್ಗದವರಿಂದ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜ ಸೇವಕರಿಂದ
- ಆರಕ್ಷಕ ಠಾಣೆ, ಸಾಂತ್ವನ ಕೇಂದ್ರಗಳು ಹಾಗೂ ವ್ಯಸನಮುಕ್ತಿ ಹೊಂದಿದ ವ್ಯಸನಿಗಳಿಂದ.
ಸೌಲಭ್ಯಗಳು :
- ಉತ್ತಮ ವಸತಿ ಮತ್ತು ಆಹಾರ, ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ
- ಆಪ್ತ ಸಮಾಲೋಚನೆ ಹಾಗೂ ಕುಟುಂಬದೊಂದಿಗೆ ಸಂವಾದ ಮತ್ತು ಗುಂಪು ಚರ್ಚೆ.
- ಮೌಲ್ಯಶಿಕ್ಷಣ, ವ್ಯಕ್ತಿತ್ವ ವಿಕಸನ, ಯೋಗ ಮತ್ತು ಧ್ಯಾನ.
- ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಸೋಲು, ಅನಾಸಕ್ತಿ ಹೊಂದಿದ ಸಂದರ್ಭದಲ್ಲಿ ಮನಸ್ಸಿನ ನಿಯಂತ್ರಣದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಮಾಹಿತಿ ಹಾಗೂ ಮಾರ್ಗದರ್ಶನ.
- ಉಪನ್ಯಾಸ ಕಾರ್ಯಕ್ರಮ-ಕಾರ್ಯಗಾರ-ಮನರಂಜನಾ ಕಾರ್ಯಕ್ರಮಗಳು, ಆಟೋಟಗಳು ಹಾಗೂ ಗ್ರಂಥಾಲಯದ ವ್ಯವಸ್ಥೆ.
ಸಮಗ್ರ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರ, ಕೊಪ್ಪಳ
ಕರ್ನಾಟಕ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯು ಒಂದು ಬರಪೀಡಿತ ಪ್ರದೇಶವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯೆಂದೇ ಪರಿಗಣಿತವಾಗಿದೆ. ಇಲ್ಲಿಯ ಜನರು ಕೈಗಾರಿಕಾ ಕೆಲಸಗಳಿಗೆ ಹೋಗುವುದೇ ಹೆಚ್ಚು. ಇಲ್ಲಿಯ ಸುತ್ತಲಿನ ಪ್ರದೇಶಗಳಲ್ಲಿ ಗಣಿಗಾರಿಕೆಯ ಕೈಗಾರಿಕೆಗಳು ಹೆಚ್ಚಾಗಿದ್ದು, ದೈಹಿಕವಾಗಿ ಶ್ರಮಪಡುವ ಕೆಲಸಗಳೇ ಜಾಸ್ತಿ. ಈ ಆಯಾಸವನ್ನು ನೀಗಿಸಲು ಜನರು ಮದ್ಯಸೇವನೆ ಹಾಗೂ ಮಾದಕ ವಸ್ತುಗಳ ಸೇವನೆಗೆ ದಾಸರಾಗುತ್ತಿದ್ದಾರೆ. ಇವುಗಳ ಪರಿಹಾರಾರ್ಥವಾಗಿ ಸುರಭಿ ಸಂಸ್ಥೆಯು 2006ರಲ್ಲಿ ಸಮಗ್ರ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರವನ್ನು ಕೊಪ್ಪಳದ ಭಾಗ್ಯ ನಗರದಲ್ಲಿ ಪ್ರಾರಂಭಿಸಿ ಈವರೆಗೆ ನಡೆಸಿಕೊಂಡು ಬಂದಿದ್ದು ಸುಮಾರು 2255 ಜನ ವ್ಯಸನಿಗಳಿಗೆ ವ್ಯಸನಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ.
ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಗಳ ಬಗ್ಗೆ ತರಬೇತಿ ಹೊಂದಿದ ಅನುಭವವುಳ್ಳ ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರದಲ್ಲಿ ದಾಖಲಾಗುವ ವ್ಯಸನಿಗಳು ಎಷ್ಟೇ ತೊಂದರೆ ಕೊಟ್ಟರು ಅದನ್ನು ಗಮನಕ್ಕೆ ತೆಗೆದುಕೊಳ್ಳದೇ ನಿಭಾಯಿಸಿ, ಸಂಯಮದಿಂದ ಅವರನ್ನು ತಿದ್ದುವ ಕೆಲಸವನ್ನು ಮಾಡುವವರಾಗಿದ್ದಾರೆ. ಈ ಕೇಂದ್ರದಲ್ಲಿ ವ್ಯವಸನಿಗಳನ್ನು 24 ಘಿ 7 ಕಾಲವು ದಾಖಲೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳನ್ನು ಕಾಣಬಹುದಾಗಿದೆ.
ಕೇಂದ್ರದಲ್ಲಿ ಜನರು ಯಾವ ರೀತಿ ಒತ್ತಡಗಳಿಗೆ ಸಿಲುಕಿ ಮದ್ಯ ಸೇವನೆ ಮತ್ತು ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಾರೆ ಮತ್ತು ಒತ್ತಡಗಳ ನಿರ್ವಹಣೆ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ತಿಳುವಳಿಕೆ ಮತ್ತು ಮಾರ್ಗದರ್ಶನ ನೀಡುವುದರ ಜೊತೆಗೆ ಸಮಾಜದ ದೃಷ್ಟಿಯಲ್ಲಿ ಕೀಳು ಭಾವನೆಯಿಂದ ಕಾಣುವ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಕ್ರಮಿಸಬೇಕಾದ ಮಾರ್ಗದರ್ಶನ ನೀಡುವುದನ್ನು ಕಾಣಬಹುದಾಗಿದೆ.
ಎಂ.ಎಸ್.ಡಬ್ಲ್ಯೂ.ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದ ನಿಮಿತ್ತ (ಫಿಲ್ಡ್ ವರ್ಕ್) ಕೇಂದ್ರಕ್ಕೆ ಭೇಟಿ ನೀಡಿ ಮದ್ಯ ವ್ಯಸನಿಗಳ ಸ್ಥಿತಿಗತಿ, ಚಿಕಿತ್ಸೆಗಳ ಹಾಗೂ ಪುನರ್ವಸತಿ ಕಾರ್ಯಕ್ಷೇತ್ರಗಳ ಮಾಹಿತಿಯನ್ನು ಪಡೆಯುವ ಸಮಯದಲ್ಲಿ ಸಿಬ್ಬಂದಿಯೊಂದಿಗೆ ಸಂವಹನ ಕಾರ್ಯದಲ್ಲಿ ತೊಡಗಿರುವುದನ್ನು ಚಿತ್ರದಲ್ಲಿ ಕಾಣಬಹುದು.