ಹಿರಿಯ ನಾಗರಿಕರಿಗಾಗಿ ಆಶ್ರಯಧಾಮ - ಗದಗ

ಪರಿಕಲ್ಪನೆ :

ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ. ಇಂದು ಸಾಮಾಜಿಕ ಸಂಬಂಧಗಳು ಹಾಗೂ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಯುವಕರು ತಂತ್ರಜ್ಞಾನ, ಹಣದ ದುರಾಸೆ ಹಾಗೂ ಸ್ವಾರ್ಥ ಪರ ಜೀವನದಿಂದ ಹಿರಿಯರೆಂದರೆ ಅನುತ್ಪಾದಕರು, ತಾಜ್ಯವಸ್ತುಗಳು ಹಾಗೂ ರಾತ್ರಿ ಕಾಲದ ತಂಗುದಾಣದ ಜೀವಿಗಳೆಂದು ಭಾವಿಸಿ ಅವರ ಆಸೆ, ಆಕಾಂಕ್ಷೆ, ಮೂಲಭೂತ ಅಗತ್ಯತೆಗಳ ಮತ್ತು ಭಾವನೆಗಳಿಗೆ ಬೆಲೆ ಕೊಡದೆ ವೃದ್ಧಾಶ್ರಮಕ್ಕೆ ತಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಹಿರಿಯರು ಮಾಹಿತಿಯ ಬಂಡಾರ ಹಾಗೂ ಕುಟುಂಬದ ಆಸ್ತಿ ಮತ್ತು ವಿಶ್ವಕೋಶ. ಇವರ ಜೀವಕ್ಕೆ ವರ್ಷಗಳು ತುಂಬಿವೆ. ಆದರೆ ಇವರ ವರ್ಷಗಳಿಗೆ ಜೀವ ತುಂಬುವ ಕೆಲಸವನ್ನು ಒಂದು ಸವಾಲೆಂದೇ ಭಾವಿಸಿ ಮಾನವೀಯತೆ ಹಣತೆಯಂತೆ ಕಾರ್ಯನಿರ್ವಹಿಸುವ ಕೇಂದ್ರವೇ ”ವೃದ್ಧಾಶ್ರಮ”’.

ಗುರಿ ಮತ್ತು ಉದ್ದೇಶಗಳು :
  • ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಹಿರಿಯ ನಾಗರೀಕರನ್ನು ಪತ್ತೆ ಮಾಡಿ ದಾಖಲು ಮಾಡಿಕೊಳ್ಳುವುದು.
  • ಇಂದು ನಾ ನಿನಗಾದರೆ, ನೀ ನನಗೆ ಎಂಬ ಭಾವನೆ ದೂರ ಸರಿದು, ನಾವೆಲ್ಲರೂ ಒಂದು ಕುಟುಂಬದವರು ಎಂಬ ಪರಿಕಲ್ಪನೆ ಮೂಡಿಸುವುದು.
  • ಅಪ್ಪನ ಸ್ವತ್ತು ಬೇಕು, ಆದರೆ ಸಂಸ್ಕಾರ ಬೇಡ ಎನ್ನುವ ಮನೋಧರ್ಮಕ್ಕೆ ಹಣವಿದ್ದರೇ ಜಗತ್ತಿನಲ್ಲಿ ಎಲ್ಲ ಸಿಗುತ್ತದೆ ಎಂದು ಭಾವಿಸುವ ಮಕ್ಕಳಿಗೆ ತಂದೆ, ತಾಯಿಗಳು ಸಿಗುವುದು ಕಷ್ಟ ಎಂಬ ಸಂದೇಶ ಸಾರುವುದು.
  • ದಿನನಿತ್ಯದ ಜೀವನದಲ್ಲಿ ಸ್ವತಂತ್ರರಾಗಿರುವಂತೆ ನೋಡಿಕೊಳ್ಳುವುದು.
  • ದೃಢನಿರ್ಧಾರ, ಚೈತನ್ಯ ತುಂಬುವುದು, ಪ್ರಭುತ್ವ ನಾಗರೀಕರನ್ನಾಗಿ ಮಾಡುವುದು.
  • ಪಾಲನೆ ಪೋಷಣೆ ಹಾಗೂ ರಕ್ಷಣೆ ನೀಡುವುದು.
ಅರ್ಹ ಫಲಾನುಭವಿಗಳು :
  • ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಮಕ್ಕಳಿಂದ ನಿರ್ಲಕ್ಷಕ್ಕೊಳಗಾದ ಮಕ್ಕಳಿಲ್ಲದ 60 ವರ್ಷ ಮೇಲ್ಪಟ್ಟ ಹಿರಿಯರು.
  • ದಾಖಲೆ ಸಂದರ್ಭದಲ್ಲಿ ಸಂಬಂಧಿಕರಾಗಲಿ, ಅಥವಾ ಪರಿಚಯವಿದ್ದ ವ್ಯಕ್ತಿಯ ಉಪಸ್ಥಿತಿ ಮತ್ತು ಅವರಿಂದ ದೃಢೀಕರಣ ಪತ್ರ.
  • ಗುರುತಿನ ಚೀಟಿ ಹಾಗೂ ಎರಡು ಪಾಸ್‍ಪೋರ್ಟ್ ಭಾವಚಿತ್ರ.
ಸೌಲಭ್ಯಗಳು :
  • ವಸತಿ ಮತ್ತು ಗುಣಮಟ್ಟದ ಆಹಾರ ಮತ್ತು ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ.
  • ಆಪ್ತ ಸಮಾಲೋಚನೆ, ಕಾನೂನಿನ ನೆರವು.
  • ಮನೋರಂಜನೆ, ಧಾರ್ಮಿಕ ಚಿಂತಕರಿಂದ ಪ್ರವಚನ.

ವೃದ್ಧಾಶ್ರಮ, ಗದಗ

ಬಾಲ್ಯ, ಯೌವ್ವನ, ಪ್ರೌಢವಸ್ಥೆ ಹಾಗೂ ಮುಪ್ಪು ನಮ್ಮ ಬಾಳಿನ ನಾಲ್ಕು ಹಂತಗಳು. ಅಕಾಲ ಮರಣ ಸಂಭವಿಸದಿದ್ದರೆ ಪ್ರತಿಯೊಬ್ಬರು ವೃದ್ಧಾಪ್ಯಕ್ಕೆ ಕಾಲಿಡುತ್ತಾರೆ. ‘ಮುಪ್ಪು ತಪ್ಪೇ’ ? ಕುಟುಂಬದಲ್ಲಿ ಹಿರಿಯರು ಇರಬೇಕು. ಹಿರಿಯರಿದ್ದ ಮನೆ ದೇವಾಲಯವಿದ್ದಂತೆ. ಮುಪ್ಪಿನಲ್ಲಿ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ತಮ್ಮನ್ನು ಚಿಕ್ಕಂದಿನಿಂದ ದೊಡ್ಡವರಾಗುವವರೆಗೆ ಸಾಕಿ, ಸಲಹಿ, ಬೆಳೆಸಿ ಸುಸಂಕೃತ ನಾಗರೀಕರನ್ನಾಗಿ ಮಾಡುತ್ತಾರೆ. ಆದಾಗ್ಯೂ ವೃದ್ಧಾಪ್ಯದಂಚಿನ ಸಮಯದಲ್ಲಿ ಮಕ್ಕಳು ಜನ್ಮ ನೀಡಿದ ತಂದೆ ತಾಯಿಗಳನ್ನು ಸಲಹಲು ಮುಂದಾಗುವುದಿಲ್ಲ. ವೃದ್ಧಾಪ್ಯ ಜೀವನದಲ್ಲಿ ಮಕ್ಕಳಿಂದ ತಾತ್ಸಾರಕ್ಕೊಳಕ್ಕಾಗಿ ಕನಿಷ್ಠ ಸೌಕರ್ಯಗಳು ಸಿಗದ ಕಾರಣ ತಂದೆ ತಾಯಿಗಳು ಬೇಸತ್ತು ತಮ್ಮ ಜೀವನದ ಗುರಿಯನ್ನೇ ಬದಲಾಯಿಸಿಕೊಂಡು ಜಿಗುಪ್ಸೆಯಿಂದ ಮರಣದ ಹಾದಿಯನ್ನು ತುಳಿಯುತ್ತಾರೆ. ಮಕ್ಕಳಿಗೂ ಮತ್ತು ಸಂಬಂಧಿಕರಿಗೂ ಬೇಡವಾದ ವೃದ್ಧರ ಬಾಳಿಗೆ ಆಶ್ರಯ ಒದಗಿಸಲು ಸಮಾಜವೇ ಹೆಗಲುಕೊಟ್ಟು ನಿಲ್ಲುವಂತಹ ಪರಿಸ್ಥಿತಿ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುರಭಿ ಸಂಸ್ಥೆಯು ಗಂಡುಮೆಟ್ಟಿದ ನಾಡು ಗದಗ ಜಿಲ್ಲೆಯ ಹುಲುಕೋಟೆ ಗ್ರಾಮದಲ್ಲಿ 2006 ರಲ್ಲಿ ನಿರ್ಮಲವಾದ ಜಾಗದಲ್ಲಿ ಸಕಲ ಸೌಲಭ್ಯಗಳನ್ನೊಳಗೊಂಡ ಕಟ್ಟಡದಲ್ಲಿ 2006-07ರಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಿ 2016-17ರ ವರೆಗಿನ ಈ ಹತ್ತು ವರ್ಷಗಳಲ್ಲಿ ಸುಮಾರು 147 ಜನ ವೃದ್ಧರಿಗೆ ಆಶ್ರಯ ನೀಡಿ ಒಂದು ನೆಲೆಯನ್ನು ಕಟ್ಟಿಕೊಟ್ಟಿರುವ ಹೆಮ್ಮೆ ಕೇಂದ್ರದ್ದಾಗಿರುತ್ತದೆ.

ಆಶ್ರಮದಲ್ಲಿ ಹಿರಿಯ ನಾಗರೀಕರ ಆರೈಕೆ ಬಗ್ಗೆ ತರಬೇತಿ ಪಡೆದ, ನುರಿತ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದಾರೆ. ಮನೆಯ ವಾತಾವರಣದಂತೆ ನಮ್ಮ ಸಿಬ್ಬಂದಿ ವರ್ಗದವರೆ ಅವರ ಮಕ್ಕಳಂತೆ ಕಾಳಜಿ ವಹಿಸಿ ಅವರ ಯೋಗಕ್ಷೇಮವನ್ನು ವಿಚಾರಿಸುವುದರ ಜೊತೆಗೆ ಖುಷಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ.

ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ನಾಗರಿಕರಿಗೆ ಹಲವಾರು ರೀತಿಯಲ್ಲಿ ಮಾನಸಿಕವಾಗಿ ಜರ್ಜರಿತರಾಗಿರುತ್ತಾರೆ. ಅವರಿಗೆ ಅವರ ಬದುಕಿನಲ್ಲಿ ಆದ ನೋವನ್ನು ಮತ್ತು ಏಕಾಂಗಿತನವನ್ನು ಹೋಗಲಾಡಿಸುವ ಸಲುವಾಗಿ ಒಳಾಂಗಣ ಆಟಗಳು ಹಾಗೂ ಭಜನಾ ಕಾರ್ಯಕ್ರಮಗಳ ಜೊತೆಗೆ ದೂರದರ್ಶನ ವ್ಯವಸ್ಥೆ ಸಹ ಮಾಡಲಾಗಿದೆ.

ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ನಾಗರೀಕರಿಗೆ ಪ್ರತಿ ವರ್ಷವು ಸುತ್ತಮುತ್ತಲಿರುವ ಪ್ರಸಿದ್ಧ ಪ್ರವಾಸಿತಾಣಗಳಿಗೆ ಪ್ರವಾಸವನ್ನು ಹಮ್ಮಿಕೊಳ್ಳುವುದರ ಮೂಲಕ ಹಿರಿಯರನ್ನು ಖುಷಿಯಾಗಿಡುವುದರ ಜೊತೆಗೆ ನೊಂದ ಮನಸ್ಸಿಗೆ ಆತ್ಮಬಲವನ್ನು ತುಂಬುವ ಕೆಲಸವನ್ನು ಮಾಡಲಾಗುತ್ತದೆ. ಪ್ರವಾಸ ಕಾಲದಲ್ಲಿ ಹಿರಿಯರ ಸುರಕ್ಷತೆ ಬಗ್ಗೆ ಕ್ರಮ ವಹಿಸಲಾಗುವುದು. ಪ್ರವಾಸ ಕಾಲದಲ್ಲಿರುವ ವೃದ್ದರನ್ನು ಚಿತ್ರದಲ್ಲಿ ಕಾಣಬಹುದು.

ಯಶೋಗಾಥೆ : ಮಕ್ಕಳ ಒಡಲ ಸೇರಿದ ವೃದ್ಧೆಯ ಕಥೆ

ಶ್ರೀಮತಿ ಬಸವ್ವ ನಿಂಗಪ್ಪ ಉಕ್ಕಲಗಾರ ಎಂಬ ವೃದ್ದ ಮಹಿಳೆಯಾದ ನಾನು ರಾಣೇಬೆನ್ನೂರು ಹತ್ತಿರದ ಇಟಗಿ ಗ್ರಾಮದವಳು. ನಾನು ನನ್ನ 32ನೇ ವಯಸ್ಸಿನಲ್ಲಿ ಮನೆಯ ಯಾವುದೋ ಒಂದು ಸಮಸ್ಯೆಯಿಂದ, ಮನೆ ಬಿಟ್ಟು ಬಂದು ಊರೂರು ಅಲೆದು ಒಬ್ಬ ಅನಾಥ ಮಹಿಳೆಯಂತೆ ಜೀವನ ಸಾಗಿಸುತ್ತಿದ್ದೆ. ನನಗೆ ಶಕ್ತಿ ಇರುವ ತನಕ ಹೊಟೇಲ, ಶ್ರೀಮಂತರ ಮನೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದೆನು. ದುಡಿಯುವ ಶಕ್ತಿ ಕಡಿಮೆಯಾದ ನಂತರ ಯಾರೂ ಕೆಲಸವನ್ನು ಕೊಡದ ಕಾರಣ ಹಗಲಲ್ಲಿ ಊಟಕ್ಕಾಗಿ ಬಿಕ್ಷೆ ಬೇಡುವುದು ಹಾಗೂ ರಾತ್ರಿಹೊತ್ತು ದೇವಸ್ಥಾನದಲ್ಲಿಯೋ ಅಥವಾ ಬಸ್ಸ್ ನಿಲ್ದಾಣದಲ್ಲಿಯೋ ಮಲಗುತ್ತಿದ್ದೆನು. ಒಂದು ದಿನ ನನಗೆ ತುಂಬಾ ಆಯಾಸವಾಗಿ ನಡೆಯಲಾಗದೆ ಗದಗ-ಬೆಟಗೇರಿ ನಗರದ ಬಾಲಭವನದ ಎದುರುಗಡೆ ರಸ್ತೆ ಪಕ್ಕದಲ್ಲಿ ಕುಳಿತುಕೊಂಡೆ, ನನಗೆ ಎದ್ದು ಹೋಗಲೂ ಆಗದೆ, ಸರ್ಕಾರಿ ಬಾಲಕರ ಬಾಲಮಂದಿರದ ಎದುರಿನ ರಸ್ತೆಯ ಪಕ್ಕದಲ್ಲಿ ಎರಡು ಮೂರು ದಿನಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತಿರುವುದನ್ನು ನೋಡಿದ ಸ್ಥಳೀಯರು, ಈ ಮಾಹಿತಿಯನ್ನು ಸುರಭಿ ವೃದ್ದಾಶ್ರಮದ ಹುಲಕೋಟಿಯ ಸಿಬ್ಬಂದಿಯವರಿಗೆ ತಿಳಿಸಿದರು. ಸುರಭಿ ವೃದ್ದಾಶ್ರಮದ ಸಿಬ್ಬಂದಿಯವರು ಬಂದು ನನ್ನನ್ನು ತಮ್ಮ ವಾಹನದಲ್ಲಿ ಆಶ್ರಮಕ್ಕೆ ಕರೆದುಕೊಂಡು ಹೋಗಿ, ಮಾತನಾಡಲೂ ಆಗದೇ ನಿಷಕ್ತಿಯಿಂದ ಬಳಲಿದ ನನಗೆ ಮೊದಲಿಗೆ ಬಿಸಿನೀರಿನಿಂದ ಸ್ನಾನವನ್ನು ಮಾಡಿಸಿ ಕೊಳೆಯಾದ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದರು. ವೈದ್ಯರನ್ನು ಕರೆಸಿ ವೈದ್ಯಕೀಯ ಚಿಕಿತ್ಸೆಯನ್ನೂ ಸಹ ನೀಡಿಸಿದರು. ಕೇಂದ್ರದ ಸಿಬ್ಬಂದಿಗಳು ನಾನು ಸಶಕ್ತಳಾದ ನಂತರ ಆಪ್ತಸಮಾಲೋಚನೆ ಮಾಡಿ ನನ್ನ ಹಿನ್ನೇಲೆಯ ಬಗ್ಗೆ ತಿಳಿದುಕೊಂಡರು.

ನನಗೆ ಇಬ್ಬರು ಗಂಡು ಮಕ್ಕಳು ಇರುವುದನ್ನು ಹೇಳಿ ನನ್ನನ್ನು ಮಕ್ಕಳೊಂದಿಗೆ ಪುನಃಸೇರಿಸಿ ಎಂದು ಆಶ್ರಮದ ಸಿಬ್ಬಂದಿಯವರಲ್ಲಿ ಕೇಳಿಕೊಂಡೆನು. ನನ್ನ ಬೇಡಿಕೆಯಂತೆ ಅವರು ನನ್ನ ಭಾವಚಿತ್ರ ಹಾಗೂ ವಿಳಾಸವನ್ನು ಪಡೆದು ಪೋಲಿಸ್ ಠಾಣೆಗೆ ನೀಡಿ ನನ್ನ ಮಕ್ಕಳನ್ನು ಕರೆಸಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂಬ ಸಲಹೇ ನೀಡಿ ನನ್ನನ್ನು ಮಕ್ಕಳೊಂದಿಗೆ ನನ್ನ ಸ್ವಂತ ಊರಾದ ಇಟಗಿ ಗ್ರಾಮಕ್ಕೆ ಕಳುಹಿಸಲು ಸಹಾಯ ಮಾಡಿದರು. ಅರವತ್ತು ವರ್ಷಗಳ ಕಾಲ ಬೀದಿ ಪಾಲಾಗಿದ್ದ ನನ್ನನ್ನು ಕೇವಲ ಒಂದೇ ವಾರದಲ್ಲಿ ನನ್ನ ಕುಟುಂಬದೊಂದಿಗೆÉ ಸೇರಿಸಿದ ಸುರಭಿ ವೃದ್ದಾಶ್ರಮದವರಿಗೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು.

ಶ್ರೀಮತಿ ಬಸವ್ವ ನಿಂಗಪ್ಪ ಉಕ್ಕಲಗಾರ

ಅಭಿಪ್ರಾಯ :

ದಿನಾಂಕ : 21/08/2017 ರಂದು ನನ್ನ ತಾಯಿಯ ಮೂರನೇ ಪುಣ್ಯತಿಥಿಯನ್ನು ಸುರಭಿ ವೃದ್ದಾಶ್ರಮ ಹುಲಕೋಟಿಯಲ್ಲಿ ಆಚರಿಸಿ, ವೃದ್ದಾಶ್ರಮದ ಫಲಾನುಭವಿಗಳಿಗೆ ಊಟದ ವ್ಯವಸ್ಥೆಮಾಡುವುದರ ಜೊತೆಗೆ ಅವರ ಆತ್ಮಕ್ಕೆ ಶಾಂತಿ ಸಲ್ಲಿಸಲಾಯಿತು. ಈ ವೃದ್ದಾಶ್ರಮದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ವೃದ್ದರು ಆಶ್ರಯಪಡೆದಿರುವುದು ಕಂಡು ಬಂದಿತು. ಹಾಗೆಯೇ ಕೆಲವು ವೃದ್ದರನ್ನು ಮಾತನಾಡಿಸಿದಾಗ ಅನಾಥರು, ಮಕ್ಕಳಿಂದ ನಿರ್ಲಕ್ಷೀಸಲ್ಪಟ್ಟವರು, ಇಲ್ಲಿ ವಾಸವಿರುವುದು ಕಂಡು ಬಂದಿತು. ಆಶ್ರಮದಲ್ಲಿ ನಾನು ಕಳೆದ ಎರಡು ಗಂಟೆಯ ಸಮಯದಲ್ಲಿ ಆಶ್ರಮದ ಸಿಬ್ಬಂದಿಯವರು ಅಲ್ಲಿರುವ ವೃದ್ಧರನ್ನು ಅವರ ಮಕ್ಕಳಿಗಿಂತಲು ಚನ್ನಾಗಿ ನೋಡಿಕೊಳ್ಳುತ್ತೀರುವುದು ಕಂಡು ಬಂದಿತು. ಸುರಭಿ ವೃದ್ದಾಶ್ರಮವು ಅನೇಕ ನೊಂದ ಹಿರಿಯ ಜೀವಗಳಿಗೆ ಆತ್ಮಬಲ ಕೊಡುವ ಒಂದು ಆಶ್ರಯದಾಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆಶ್ರಮದಲ್ಲಿ ಎಲ್ಲ ವೃದ್ಧರು ಮತ್ತು ಸಿಬ್ಬಂದಿಯವರು ಒಂದೇ ಕುಟುಂಬದ ಸದಸ್ಯರಂತೆ ಅನ್ಯೊನ್ಯವಾಗಿದ್ದಾರೆ. ಸುರಭಿ ವೃದ್ದಾಶ್ರಮವು ವೃದ್ದರ ಬಾಳಿನ ಆಶಾಕಿರಣದಂತೆ ಕಾರ್ಯನಿರ್ವಹಿಸುತ್ತಿದೆ. ಇಂಥಹ ಕೆಲಸವನ್ನು ನಿರ್ವಹಿಸುತ್ತಿರುವ ಸುರಭಿ ಮಹಿಳಾ ಮಂಡಳಿ ಸಂಸ್ಥೆಯ ಪಾತ್ರವು ಪ್ರಶಂಸನೀಯ.

ಬಿ. ಶೇಖರ ಶೆಟ್ಟಿ
ಪ್ರಾದೇಶಿಕ ಪ್ರಬಂಧಕರು
ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ
ಗದಗ ವಿಭಾಗ, ಗದಗ