ಪರಿಕಲ್ಪನೆ :
ಇಂದು ಮಾನವೀಯ ಮೌಲ್ಯಗಳು ನಶಿಸಿ ಮಾರುಕಟ್ಟೆಯ ಮೌಲ್ಯಕ್ಕೆ ಹವಣಿಸುತಿರುವ ಸಮಾಜದಲ್ಲಿ ವಿಕೃತ ಮನಸ್ಸಿನ ಮತ್ತು ಸ್ವಾರ್ಥಪರ ಲಾಲಸೆಗೆ ಮಹಿಳೆಯರು ಮತ್ತು ಮಕ್ಕಳನ್ನು ಅನೈತಿಕವಾಗಿ ಸಾಗಾಣಿಕೆ ಮೂಲಕ ಅತ್ಯಾಚಾರ, ಮಾನಸಿಕ ಹಿಂಸೆ, ದೈಹಿಕ ದಂಡನೆ ಹಾಗೂ ವಿವಿಧ ಕೆಳಮಟ್ಟದ ವೃತ್ತಿ ಹಾಗೂ ಪ್ರವೃತ್ತಿಗೆ ತೊಡಗಿಸಿ ಹಣಗಳಿಸಲು ಮಾಡುವ ದೌರ್ಜನ್ಯವನ್ನು ತಡೆದು ಸಾಗಾಣೆಯಿಂದ ರಕ್ಷಿಸಲ್ಪಟ್ಟ ಮಹಿಳೆ / ಮಕ್ಕಳ ಸಮಸ್ಯೆ ಇತ್ಯರ್ಥವಾಗುವವರೆಗೂ ಅವರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ತಾತ್ಕಾಲಿಕ ರಕ್ಷಣೆ ಮತ್ತು ಆಶ್ರಯ ನೀಡಿ ಅವರ ಹಕ್ಕುಗಳನ್ನು ಗೌರವಿಸಿ ರಕ್ಷಿಸುವ ಮಹತ್ಕಾರ್ಯದ ಜೊತೆಗೆ ಮಹಿಳೆ / ಮಕ್ಕಳ ಪುನರ್ವಸತಿ ಕಾರ್ಯವನ್ನು ಅನುಷ್ಠಾನಗೊಳಿಸುವ ಯೋಜನೆಯೇ ಉಜ್ವಲ ಯೋಜನೆ’’.
ಗುರಿ ಮತ್ತು ಉದ್ದೇಶ :
- ಮಹಿಳೆಯರು ಹಾಗೂ ಮಕ್ಕಳನ್ನು ಬೀದಿ ನಾಟಕ, ಜಾಥ, ಕಾರ್ಯಾಗಾರಗಳು ಹಾಗೂ ಕರಪತ್ರಗಳ ಮೂಲಕ ಜಾಗೃತಗೊಳಿಸಿ ಸಾಗಾಣಿಕೆ ನಿಯಂತ್ರಿಸುವುದು.
- ಗ್ರಾಮಪಂಚಾಯಿತಿಯ ಜನ ಪ್ರತಿನಿಧಿಗಳು ಹಾಗೂ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಮಕ್ಕಳಿಗೆ ಅನೈತಿಕ ಸಾಗಾಣಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವುದು.
- ಸಮುದಾಯ ಗುಂಪು ರಚನೆ ಮತ್ತು ಕಾಳಜಿ ಸಮಿತಿ ರಚಿಸಿ, ಸಭೆಗಳನ್ನು ನಡೆಸಿ ಸೂಕ್ತ ರಕ್ಷಣೆ ಒದಗಿಸುವುದು.
- ರಹಸ್ಯ ಕಾರ್ಯಾಚರಣೆ ಮೂಲಕ ಅನೈತಿಕ ಸಾಗಾಣಿಕೆ ಮತ್ತು ಮಾರಾಟ ಜಾಲಗಳನ್ನು ಪತ್ತೆ ಹಚ್ಚಿ ಅರ್ಹರಿಗೆ ಸಾಮಾಜಿಕ ಭದ್ರತೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವುದು. ಮತ್ತು ಸಾಗಾಣೆದಾರರನ್ನು ಗುರ್ತಿಸಿ ಸೂಕ್ತ ಕಾನೂನು ರೀತ್ಯ ಶಿಕ್ಷೆಗೊಳಪಡಿಸುವುದು. ಮಹಿಳೆಯರ ಮತ್ತು ಮಕ್ಕಳ ಮಾನವ ಹಕ್ಕುಗಳ ರಕ್ಷಣೆ, ಗೌರವಿಸುವುದು ಹಾಗೂ ಉಲ್ಲಂಘನೆಯಾಗದಂತೆ ತಡೆಯುವುದು.
ಅರ್ಹ ಫಲಾನುಭವಿಗಳು :
ದುರ್ಬಲ ವರ್ಗದ ಹಾಗೂ ಸಾಗಾಣಿಕೆ ಅಪಾಯದ ಅಂಚಿನಲ್ಲಿರುವ ಮಹಿಳೆಯರು ಮತ್ತು ಮಕ್ಕಳು, ಅವಿವಾಹಿತ ಮಹಿಳೆಯರು, ಬಾಲಕೀಯರು, ವಿಧವೆಯರು, ವಿಚ್ಛೇದನಕ್ಕೊಳಗಾದ ಮಹಿಳೆಯರು, ಪ್ರಾಯ ಪೂರ್ವ ಬಾಲಕೀಯರು ಹಾಗೂ ಏಡ್ಸ್‍ನಿಂದ ಬಳಲುತ್ತಿರುವ ಮಹಿಳೆಯರು ಹಾಗೂ ಮಕ್ಕಳು. ಪ್ರಕೃತಿ ವಿಕೋಪಕ್ಕೆ ಒಳಗಾದ ಪ್ರದೇಶದ ಮಹಿಳೆಯರು/ಮಕ್ಕಳು, ನಿರ್ಲಕ್ಷ್ಯಿತ ಮಕ್ಕಳು, ಆಶ್ರಯ-ರಕ್ಷಣೆ ಹಾಗೂ ನೆರವು ಕೋರಿ ಬಂದ ಮಹಿಳೆಯರು ಹಾಗೂ ಮಕ್ಕಳು.
ಸೌಲಭ್ಯಗಳು :
- ಮೂಲಭೂತ ಸೌಕರ್ಯಗಳಾದ ತಾತ್ಕಾಲಿಕ ಆಶ್ರಯ, ಊಟ ಮತ್ತು ವಸತಿ.
- ಅನೌಪಚಾರಿಕ ಶಿಕ್ಷಣ, ಮನರಂಜನೆ ಹಾಗೂ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ.
- ಆಪ್ತ ಸಮಾಲೋಚನೆ ಹಾಗೂ ಕುಟುಂಬ ಸಮಾಲೋಚನೆ ಮತ್ತು ರಕ್ಷಣೆ.
- ಆದಾಯೋತ್ಪನ್ನ ವೃತ್ತಿಪರ ಚಟುವಟಿಕೆಗಳ ತರಬೇತಿಗಳಾದ ಟೈಲರಿಂಗ್, ಗೊಂಬೆಗಳ ತಯಾರಿಕೆ, ಕಸೂತಿ ಕೆಲಸ ಇತ್ಯಾದಿಗಳನ್ನು ನೀಡಿ ಪುನರ್ವಸತಿ ಕಲ್ಪಿಸಿಕೊಡುವುದು.
- ಕುಟುಂಬಕ್ಕೆ ವಿಲೀನಗೊಳಿಸಿದ ನಂತರ ನಿರಂತರ ಅನುಸರಣೆ ಮಾಡುವುದು.
ದಾಖಲಾತಿ ಮೂಲಗಳು :
- ಪೊಲೀಸ್ ಠಾಣೆ, ಗ್ರಾಮ ಪಂಚಾಯ್ತಿ, ಸಾರ್ವಜನಿಕರಿಂದ ಹಾಗೂ ಕುಟುಂಬದವರಿಂದ.
- ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘ, ಸ್ವಯಂ ಸೇವಾ ಸಂಘ ಹಾಗೂ ಸಮಾಜ ಸೇವಕರಿಂದ
- ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಕಾವಲು ಸಮಿತಿಗಳು, ಸಾಂತ್ವನ ಕೇಂದ್ರಗಳು ಹಾಗೂ ಮಕ್ಕಳ ಸಹಾಯ ವಾಣಿ.
- ಮಿಸ್ಸಿಂಗ್ ಚೈಲ್ಡ್ ಬ್ಯೂರೋ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು.
ಉಜ್ವಲ ಯೋಜನೆ, ಶಿವಮೊಗ್ಗ. (ಮಹಿಳೆಯರ ಹಾಗೂ ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ನಿಂಯತ್ರಣ ಯೋಜನೆ)
ಸಮಾಜದಲ್ಲಿ ಹೆಣ್ಣು ಪಾಲಿಗೆ ಕಳಂಕವಾಗಿರುವ ಹಾಗೂ ಸಮಾಜದ ಪಿಡುಗಾಗಿರುವ ಬೂದಿಮುಚ್ಚಿದ ಕೆಂಡದಂತಿರುವ, ಸ್ತ್ರೀಯರ ಪ್ರಾಬಲ್ಯಕ್ಕೆ ಮಾರಕವಾಗಿ ಬೃಹದಕಾರವಾಗಿ ಬೆಳೆಯುತ್ತಿರುವ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಮತ್ತು ಮಾರಾಟವನ್ನು ತಡೆಗಟ್ಟಲು, ಸಾಗಾಣಿಕೆಗೆ ಒಳಗಾದ ಮಹಿಳೆಯರನ್ನು ಮತ್ತು ಮಕ್ಕಳನ್ನು ರಕ್ಷಿಸಿ, ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಲು ಸುರಭಿ ಸ್ವಯಂ ಸೇವಾ ಸಂಸ್ಥೆಯು ದಿನಾಂಕ : 28–03–2009 ರಂದು ಶಿವಮೊಗ್ಗ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡದಲ್ಲಿ ‘ಉಜ್ವಲ ಯೋಜನೆ’ಯನ್ನು ಪ್ರಾರಂಭಿಸಿ ಈ 8 ವರ್ಷಗಳ ಅವಧಿಯಲ್ಲಿ ಸುಮಾರು 1424 ಸಂತ್ರಸ್ಥೆಯರನ್ನು ದಾಖಲಿಸಿಕೊಂಡು ಕಾನೂನು ನೆರವು ನೀಡಿ ರಕ್ಷಿಸುವುದರ ಮೂಲಕ ಅವರಲ್ಲಿ ದೈರ್ಯತುಂಬುವ ಕೆಲಸವನ್ನು ಮಾಡಿ ಪುರ್ನವಸತಿ ಕಲ್ಪಿಸಿಕೊಡಲಾಗಿದೆ.
ಕೇಂದ್ರವು ನುರಿತ, ವಿಶೇಷವಾಗಿ ಪರಿಣಿತಿ ಹೊಂದಿದ ಅನುಭವ ಹಾಗೂ ಸೇವಾ ಮನೋಭಾವವುಳ್ಳ ಯೋಜನಾ ನಿರ್ದೇಶಕರನ್ನೊಳಗೊಂಡಂತೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು ಜನಜಾಗೃತಿ ಕಾರ್ಯಕ್ರಮಗಳ ಸಭೆಗಳನ್ನು ನಡೆಸುವುದು ಹಾಗೂ ಬಾಲಕ / ಬಾಲಕಿಯರ ಸಂಘ ಮತ್ತು ಕಾವಲು ಸಮಿತಿಗಳ ರಚನೆ ಮಾಡಿ, ಅರಿವು ಮೂಡಿಸುವುದರ ಜೊತೆಗೆ ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಿಬ್ಬಂದಿಗಳು ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಸಂತ್ರಸ್ಥ ಮಹಿಳೆಯರ ಪ್ರತ್ಯೇಕ ಸಮಸ್ಯೆಗಳನ್ನು ಹಾಲಿಸಿ ತಕ್ಕ ಪರಿಹಾರ ಕಂಡುಕೊಳ್ಳುವ ಕೆಲಸದಲ್ಲಿ ನೆರವಾಗುವ ಸಿಬ್ಬಂದಿಯನ್ನು ಕೇಂದ್ರದಲ್ಲಿ ಕಾಣಬಹುದು.
ಉಜ್ವಲ ಸಿಬ್ಬಂದಿ ಹಾಗೂ ಪೋಲಿಸ್ ಇಲಾಖೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಮಹಿಳೆಯ ಕುಟುಂಬವು ಅವಳನ್ನು ಕುಟುಂಬ ವಿಲೀನಕ್ಕೆ ನಿರಾಕರಿಸಿದ ಮೇರೆಗೆ ಮಹಿಳೆಯು ನಮ್ಮ ಕೇಂದ್ರದಲ್ಲಿಯೇ ಆಶ್ರಯ ಮತ್ತು ವಸತಿಯನ್ನು ಮುಂದುವರೆಸಿ ತರಬೇತಿ ಪಡೆದು, ಸೂಕ್ತ ಸಮಾಲೋಚನೆಯ ನಂತರ ಮಾನಸಿಕವಾಗಿ ತಾನು ಹೊಸ ಕುಟುಂಬಕ್ಕೆ ಸೇರ್ಪಡೆಗೊಳ್ಳಲು ಪರಿವರ್ತನೆಯಾಗಿರುತ್ತಾಳೆ. ನಂತರದಲ್ಲಿ ಕೇಂದ್ರದ ಸಿಬ್ಬಂದಿಯ ಪರಿಶ್ರಮದ ಫಲವಾಗಿ ಸದರಿ ಮಹಿಳೆಗೆ ಮದುವೆ ಮಾಡುವ ಕಾರ್ಯದಲ್ಲಿ ವರನನ್ನು ಹುಡುಕಿ, ಅವನ ಪೂರ್ವಾಪರಗಳನ್ನು ಪರಿಶೀಲಿಸಿ, ಅವನ ಸಾಮಾಜಿಕ ಹಾಗೂ ಆರ್ಥಿಕ ಸಾಮಥ್ರ್ಯವನ್ನು ತಿಳಿದು ಮದುವೆ ಮಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.