ವಿಕಲಚೇತನ ಉದ್ಯೋಗಸ್ಥ ಮಹಿಳೆಯರ ಮತ್ತ ಬಾಲಕಿಯರ ವಸತಿ ನಿಲಯ - ಶಿವಮೊಗ್ಗ

ಪರಿಕಲ್ಪನೆ :

ಎಲ್ಲಿ ಹುಟ್ಟಿದೆ ಅಲ್ಲಿ ಸಾವು ಇದ್ದೇಇದೆ. ಹೊರಗಿನ ಶಕ್ತಿ ರೂಪವೇ ದೇವರು. ಈ ಸಮಾಜದಲ್ಲಿ ಸೃಷ್ಟಿಯ ವೈಫಲ್ಯದಿಂದಾಗುವ ನೂನ್ಯತೆ, ವಿಕಲತೆ, ಹಾಗೂ ಅಂಗವಿಕಲತೆಗೆ ಆಂತರಿಕ ಮತ್ತು ಬಾಹ್ಯ ಕಾರಣಗಳನೇಕ. ತನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವರಂತೆ ಖಿನ್ನತೆಗೆ ಒಳಗಾಗಿ ನೋವನ್ನು ಅನುಭವಿಸುತ್ತಿರುವಂತಹ ವ್ಯಕ್ತಿಗಳಿಗೆ ಆತ್ಮವಿಶ್ವಾಸ ತುಂಬಿ ಸಮಾಜಮುಖಿ ಚಿಂತನೆಗಳ ಮೂಲಕ ಸ್ವಾವಲಂಭಿ ಬದುಕು ಕಟ್ಟಿಕೊಟ್ಟು ತನ್ನ ವರ್ತಮಾನವನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಸಂಯೋಜಿತ ಬದುಕನ್ನು ಕಲ್ಪಿಸಿಕೊಡುವ ಯೋಜನೆಯ ಅಂಗ ಸಂಸ್ಥೆಯೇ “ಅಂಗವಿಕಲರ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ”’.

ಗುರಿ ಮತ್ತು ಉದ್ದೇಶಗಳು :
  • ಅಂತಃಶಕ್ತಿ ಮತ್ತು ಆತ್ಮವಿಶ್ವಾಸ ತುಂಬಿ ಸಮಾಜದ ಮುಖ್ಯವಾಹಿನಿಗೆ ತರುವುದು.
  • ಅನನ್ಯ ಅವಕಾಶ ಮತ್ತು ಸಮರ್ಪಕ ಸೌಲಭ್ಯ ನೀಡಿ, ವಿದ್ಯಾವಂತರನ್ನಾಗಿಸುವುದು
  • ಕಾಯಕ ತತ್ವ ಮತ್ತು ಕ್ರಿಯಾಶೀಲತೆ ರೂಢಿಸಿ ತಮ್ಮ ಭವಿಷ್ಯದ ಬಗ್ಗೆ ಅರ್ಥೈಸುವುದು.
  • ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ಪಾಲ್ಗೊಂಡು ಸ್ವಾವಲಂಭಿಗಳಾಗಿ ಬದುಕಲು ಉತ್ತೇಜನ ನೀಡುವುದು ಹಾಗೂ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು.
ಅರ್ಹ ಫಲಾನುಭವಿಗಳು :
  • 6ನೇ ತರಗತಿಯಿಂದ ಪದವಿವರೆಗಿನ ವಿಕಲಚೇತನ ವಿದ್ಯಾರ್ಥಿನಿಯರು.
  • ವಿವಿಧ ತರಬೇತಿ ಪಡೆಯುತ್ತಿರುವ ಹಾಗೂ ಯಾವುದೇ ಉದ್ಯೋಗಸ್ಥ ವಿಕಲಚೇತನ ಮಹಿಳೆ / ವಿದ್ಯಾರ್ಥಿನಿಯರು.
ಸೌಲಭ್ಯಗಳು :
  • ಮೂಲಭೂತ ಸೌಕರ್ಯಗಳದ ಊಟ, ವಸತಿ ಹಾಗೂ ತಾತ್ಕಾಲಿಕ ಆಶ್ರಯ.
  • ಆಪ್ತ ಸಮಾಲೋಚನೆ, ಕುಟುಂಬ ಸಮಾಲೋಚನೆ, ಹಾಗೂ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ.
  • ಮನೋರಂಜನೆ, ದೂರದರ್ಶನ ವೀಕ್ಷಣೆ, ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್, ಇತ್ಯಾದಿ ಆಟಗಳು
  • ದಿನಪತ್ರಿಕೆಗಳನ್ನು ಓದುವುದು, ಯೋಗಾಸನ, ದೂರವಾಣಿ ನೆರವು.
  • ವೃತ್ತಿ ಮತ್ತು ಪ್ರವೃತ್ತಿಗೆ ಬೇಕಾದ ವಿಶೇಷ ಕೌಶಲ್ಯಗಳ ತರಬೇತಿ.
ದಾಖಲಾತಿ ಮೂಲಗಳು :
  • ಸಾರ್ವಜನಿಕರು, ಸ್ತ್ರೀಶಕ್ತಿ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳು.
  • ಸಮಾಜ ಸೇವಕರು, ಕುಟುಂಬದವರು ಹಾಗೂ ಕುಟುಂಬ ಸ್ನೇಹಿತರು.

ಅಂಗವಿಕಲ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ, ಶಿವಮೊಗ್ಗ.

ಮಾನವ ಸಮಾಜದಲ್ಲಿ ಮನುಷ್ಯ ಸೃಷ್ಟಿಯ ವೈಫಲ್ಯದಿಂದಾಗುವ ತೊಂದರೆಗಳು, ನೂನ್ಯತೆಗಳು ಹಾಗೂ ಇತರೆ ಹಲವಾರು ಸಮಸ್ಯೆಗಳಿಗೆ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಗುರಿಯಾಗುತ್ತಾನೆ. ಈ ಸಂಬಂಧ ಸಮಸ್ಯೆಗಳಿಗೆ ಒಳಗಾದ ವಿಕಲಚೇತನ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವುದೆಂಬ ಕಲ್ಪನೆಯೊಂದಿಗೆ ಮಲೆನಾಡ ತವರೂರೆಂದೇ ಖ್ಯಾತಿಯಾಗಿರುವ ಶಿವಮೊಗ್ಗ ನಗರದ ರಾಜೇಂದ್ರ ನಗರದಲ್ಲಿ 2007-08 ರಿಂದ ಪ್ರಾರಂಭವಾಗಿ ಪರಿಪೂರ್ಣ ವ್ಯವಸ್ಥೆಯ ಕಟ್ಟಡದಲ್ಲಿ “ಅಂಗವಿಕಲ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ”ವು ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಈ ಹತ್ತು ವರ್ಷಗಳ ಅವಧಿಯಲ್ಲಿ 179 ವಿಕಲ ಚೇತನ ವಿದ್ಯಾರ್ಥಿನಿಯರು/ಉದ್ಯೋಗಸ್ಥ ಮಹಿಳೆಯರು ಕೇಂದ್ರದ ಸವಲತ್ತನ್ನು ಪಡೆದಿರುತ್ತಾರೆ.

ವಸತಿ ನಿಲಯದಲ್ಲಿ ನುರಿತ, ಅನುಭವವುಳ್ಳ, ಉತ್ತಮ ಸೇವಾ ಮನೋಭಾವ ಹೊಂದಿರುವ ಆದರ್ಶ ನಡತೆಯ ಹಾಗೂ ನಿಲಯದ ಫಲಾನುಭವಿಗಳನ್ನು ತಮ್ಮ ಮನೆಯ ಸದಸ್ಯರೆಂದೇ ಭಾವಿಸಿ ನೋಡಿಕೊಳ್ಳುವ ಒಳ್ಳೆಯ ಮನಸ್ಸಿನ ಹಾಗೂ ನಿಸ್ವಾರ್ಥ ಸೇವೆಸಲ್ಲಿಸುವ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾ ಬಂದಿರುತ್ತಾರೆ.

ಸಮಾಜದಲ್ಲಿ ಸೃಷ್ಠಿಯ ವೈಫಲ್ಯದಿಂದ ಅನೇಕ ರೀತಿಯ ತೊಂದರೆಗಳಿಗೆ ಹಾಗೂ ಅಂಗವಿಕಲತೆಗೆ ಗುರಿಯಾಗಿ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡಂತೆ ಖಿನ್ನತೆಗೆ ಒಳಗಾಗಿ ಮನುಷ್ಯ ತೊಳಲಾಡುತ್ತಾನೆ. ಇಂತಹ ಖಿನ್ನತೆಯಿಂದ ಹೊರ ಬರಲು ಮತ್ತು ಇವರಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಜಿಲ್ಲಾ ಮಟ್ಟದ ಅಂಗವಿಕಲ ಕ್ರೀಡಾಕೂಟ ಏರ್ಪಡಿಸಿ, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಣೆ ಮಾಡುತ್ತಿರುವ ಕಾರ್ಯಕ್ರಮದ ಒಂದು ನೋಟ.

ಯಶೋಗಾಥೆ: ಬದುಕಿಗೆ ಊರುಗೋಲಾದ ವಸತಿ ನಿಲಯ

ಶಿವಮೋಗ್ಗ ಜಿಲ್ಲೆ ಅಗರದಳ್ಳಿ ಗ್ರಾಮದವಾಸಿ ಶಿವಮ್ಮ ಆದಾ ನಾನು ಸುರಭಿ ಅಂಗವಿಕಲ ಸಂಸ್ಥೆಯ ಫಲಾನುಭವಿಯಾಗಿದ್ದು, ಹಳ್ಳಿಯಿಂದ ಬಂದವಳಾಗಿದ್ದೇನೆ. ನನ್ನ ಕುಟುಂಬ ತುಂಬಾ ಆರ್ಥಿಕ ಸಂಕಷ್ಟದಲ್ಲಿದ್ದು, ಜೊತೆಗೆ ನಾನು ದೈಹಿಕ ಅಂಗವಿಕಲಳಾಗಿರುತ್ತೇನೆ. ವಿದ್ಯಾಭ್ಯಾಸಕ್ಕೆ ಹೋಗಬೇಕೆಂದರೆ ನನ್ನ ಊರಿನಲ್ಲಿ ಬಸ್ಸಿನ ವ್ಯವಸ್ಥೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ನಾನು ಸುರಭಿ ಅಂಗವಿಕಲ ವಸತಿನಿಲಯ ಸಿಬ್ಬಂದಿಯ ಮಾಹಿತಿ ಮೇರೆಗೆ ವಸತಿ ನಿಲಯಕ್ಕೆ ದಾಖಲಾಗಿರುತ್ತೇನೆ. ಕೇಂದ್ರದ ನೆರವಿನಿಂದ ನಾನು ಪದವಿ, ಸ್ನಾತಕೋತ್ತರ ಶಿಕ್ಷಣ, ಕಂಪ್ಯೂಟರ್, ಟೈಪಿಂಗ್ ಶಿಕ್ಷಣವನ್ನು ಸಹ ಮುಗಿಸಿರುತ್ತೇನೆ. ಸ್ಪರ್ಧಾತ್ನಕ ಪರೀಕ್ಷೆಗಳನ್ನು ಸಹ ತೆಗೆದುಕೊಂಡಿರುತ್ತೇನೆ. ಹಾಗೆಯೇ ಕೆಲಸಕ್ಕೆ ಕೂಡ ಸೇರಿಕೊಂಡಿರುತ್ತೇನೆ. ನಾನು ನಮ್ಮ ಹಳ್ಳಿಯಲ್ಲಿಯೇ ಇದ್ದಿದ್ದರೆ ಖಂಡಿತವಾಗಿಯೂ ಇಷ್ಟೆಲ್ಲಾ ವಿದ್ಯಾಭ್ಯಾಸ ಮಾಡಿ ನೌಕರಿಗೆ ಹೋಗಲು ಸಾಧ್ಯವಾಗುತ್ತಿರುತ್ತಿಲ್ಲ. ಕೇಂದ್ರದ ಸಿಬ್ಬಂದಿ ಸಹಯ ಮತ್ತು ಸಹಕಾರದಿಂದ ನನ್ನ ಇಷ್ಟದಂತೆ ಮದುವೆ ಮಾಡಿಕೊಂಡು ಸುಖವಾಗಿದ್ದೆನೆ. ಅಂಗವಿಕಲ ವಸತಿ ನಿಲಯದಲ್ಲಿ ಉಚಿತ ಊಟ ಮತ್ತು ವಸತಿಯ ಸೌಲಭ್ಯವಿದ್ದು ಸ್ವಚ್ಚತೆಯಿಂದ ಕೂಡಿರುತ್ತದೆ. ಅಂಗವಿಕಲರಿಗೆ ಅನುಕೂಲವಾಗುವ ರೀತಿಯ ಶೌಚಾಲಯ, ಮಲಗುವ ವ್ಯವಸ್ಥೆಕೂಡ ಉತ್ತಮ ವಾಗಿರುತ್ತದೆ. ನನ್ನಂತಹ ಅದೆಷ್ಟೋ ಅಂಗವಿಕಲ ವಿದ್ಯಾರ್ಥಿನಿ ಹಾಗೂ ಮಹಿಳೆಯರಿಗೆ ಈ ವಸತಿ ನಿಲಯವು ಆಸರೆಯಾಗಿ ಇನ್ನೂ ಮುಂದೆಯೂ ಇದೇ ರೀತಿ ಸೇವೆಯನ್ನು ಮುಂದುವರೆಯಲಿ ಎಂದು ಹಾರೈಸುತ್ತೇನೆ.

ಶಿವಮ್ಮ
ಫಲಾನುಭವಿ

ಅಭಿಪ್ರಾಯ :

ರಾಜ್ಯ ಸರ್ಕಾರದ ಅನುದಾನದೊಂದಿಗೆ ಶಿವಮೊಗ್ಗ ನಗರದಲ್ಲಿ ಪ್ರಾರಂಭವಾಗಿರುವ ಸುರಭಿ ಅಂಗವಿಕಲರ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯವು ಅದೆಷ್ಟೋ ಅಂಗವಿಕಲರ ಬಾಳಿನಲ್ಲಿ ಆಶಾಕಿರಣವಾಗಿದೆ. ಗ್ರಾಮೀಣ ಭಾಗದಲ್ಲಿನ ಅಂಗವಿಲಕರು ಬದುಕನ್ನು ಕಟ್ಟಿಕೊಳ್ಳಲು ಹೊಡೆದಾಡುತ್ತಿರುವಾಗ ಶಿವಮೊಗ್ಗದಲ್ಲಿ ಅಂಗವಿಕಲರ ವಸತಿ ನಿಲಯವು ಪ್ರಾರಂಭವಾಗಿದ್ದು, ಅಂಗವಿಕಲರ ಬಾಳಿಗೆ ಆಸರೆಯಾಗಿದೆ. ಇಲ್ಲಿನ ವಸತಿ ನಿಲಯದಲ್ಲಿ ಊಟ, ವಸತಿ, ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಗವಿಕಲರ ಜೀವನಕ್ಕೆ ದಾರಿ ಮಾಡಿಕೊಟ್ಟಂತಹ ಸುರಭಿ ಸಂಸ್ಥೆಯು ಇನ್ನು ಮುಂದೆಯೂ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇನೆ.

ಗಂಗಾ,
ಸ್ಥಳೀಯರು, ಶಿವಮೊಗ್ಗ