ಸ್ವಾಧರ ಗೃಹ - ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ತಾತ್ಕಾಲಿಕ ಆಶ್ರಯ ಮತ್ತು ಪುನರ್ವಸತಿ ಯೋಜನೆ-ಶಿವಮೊಗ್ಗ

ಪರಿಕಲ್ಪನೆ :

ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಾನಸಿಕ ಕಿರುಕುಳ, ದೈಹಿಕ ಹಿಂಸೆ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆ, ಅತ್ಯಾಚಾರ, ಲೈಂಗಿಕ ಕಿರುಕುಳ, ವಿವಾಹ ಪೂರ್ವ ಗರ್ಭಿಣಿಯರು, ವಿಧವೆಯರು, ನಿರಾಶ್ರಿತರು, ಸಮಸ್ಯೆಗಳನ್ನು ನಿಭಾಯಿಸಲು ಅಸಮರ್ಥರಾದ ನೊಂದ ಹೆಣ್ಣು ಮಕ್ಕಳ ಹಾಗೂ ಮಹಿಳೆಯರಿಗೆ ಭಾವನಾತ್ಮಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಸದೃಢತೆ ತುಂಬಿ, ಸ್ವಾವಲಂಬಿಗಳಾಗಿ ಬದುಕಲು ಮುಖ್ಯವಾಹಿನಿಗೆ ತರುವ ಉದ್ದೇಶಿತ ಕಾರ್ಯಕ್ರಮವೇ ಸ್ವಾಧಾರ ಗೃಹ ಯೋಜನೆ’

ಗುರಿಗಳು ಮತ್ತು ಉದ್ದೇಶಗಳು :
  • ನೊಂದ ಮಹಿಳೆ ಮತ್ತು ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಿಸಿ, ಯಾವುದೇ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ನಿಭಾಯಿಸುವ ಸಾಮಥ್ರ್ಯವನ್ನು ಕಲ್ಪಿಸುವುದು.
  • ಹೆಣ್ಣು ಸಮಾಜದಕಣ್ಣು. ಬದುಕಿನ ಕನ್ನಡಿ, ಕುಟುಂಬಕ್ಕೆ ಆಧಾರ ಸ್ತಂಬ ಎಂಬುದನ್ನು ಮನವರಿಕೆ ಮಾಡುವುದು.
  • ವೃತ್ತಿ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದು.
  • ಕುಟುಂಬ / ಸಮಾಜದಲ್ಲಿ ಹೊಂದಿಕೊಂಡು ಜೀವನ ನಡೆಸಿಕೊಂಡು ಹೋಗುವ ಬಗ್ಗೆ ಕಾನೂನಿನ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.
ಅರ್ಹ ಫಲಾನುಭವಿಗಳು :
  • ವರದಕ್ಷಿಣೆ ಕಿರುಕುಳ, ವಿವಾಹ ಪೂರ್ವ ಗರ್ಭಿಣಿಯರು, ಗರ್ಭಿಣಿಯರು, ಹಾಗೂ ವಿಧವೆಯರು.
  • ಕೌಟುಂಬಿಕ ದೌರ್ಜನ್ಯದಿಂದ ಮನೆಯಲ್ಲಿ ವಾಸ ಮಾಡಲು ಸಾಮಾಜಿಕ ರಕ್ಷಣೆಯ ಕೊರತೆಯಿರುವ ನೊಂದ ಮಹಿಳೆ / ಬಾಲಕಿಯರು.
  • ವೈವಾಹಿಕ ಸಮಸ್ಯೆಯಿಂದ ಕಾನೂನಿನ ಮೊರೆ ಹೋಗಿರುವಂತಹ ಮಹಿಳೆಯರು
  • ಲೈಂಗಿಕ ಕಿರುಕುಳಕ್ಕೊಳಗಾಗಿ ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಹೊಂದಾಣಿಕ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಮತ್ತು ಬಾಲಕಿಯರು.
  • 18-55 ವರ್ಷ ವಯೋಮಿತಿಯೊಳಗಿನ ಮಹಿಳೆಯರು / ಬಾಲಕಿಯರಿಗೆ ಆದ್ಯತೆ.
ಸೌಲಭ್ಯಗಳು :
  • ಉಚಿತ ಊಟ ಮತ್ತು ತಾತ್ಕಾಲಿಕ ಆಶ್ರಯ ನೀಡುವುದು, ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ.
  • ಆಪ್ತ ಸಮಾಲೋಚನೆ, ಉಚಿತ ಕಾನೂನು ನೆರವು, ಪೊಲೀಸ್ ರಕ್ಷಣೆ, ಸಾಮಾಜಿಕ ಭದ್ರತೆ ಒದಗಿಸುವುದು.
  • ವೃತ್ತಿಪರ ಜೀವನ ಕೌಶಲ್ಯಗಳ ತರಬೇತಿ ಮತ್ತು ಮಕ್ಕಳ ವಿದ್ಯಾಭ್ಯಾಸ ಮುಂದುವರಿಕೆಗೆ ಅಗತ್ಯ ವ್ಯವಸ್ಥೆ.
ದಾಖಲಾತಿ ಮೂಲಗಳು :
  • ಸಾರ್ವಜನಿಕರು, ಸ್ತ್ರೀಶಕ್ತಿ ಸಂಘ, ಸ್ವಯಂ ಸೇವಾ ಸಂಸ್ಥೆ, ಸಮಾಜ ಸೇವಕರು, ಕುಟುಂಬ ಸದಸ್ಯರು.
  • ಪೋಲಿಸ್ ಠಾಣೆ, ಮಹಿಳಾ ಸಂರಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಾಂತ್ವನ ಕೇಂದ್ರ,
  • ನ್ಯಾಯಾಲಯದ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿ. ದಾಳಿ ಮಾಡಿ ರಕ್ಷಣೆ ಮಾಡುವ ತಂಡದಿಂದ.

ಸ್ವಾಧಾರ ಗೃಹ, ಶಿವಮೊಗ್ಗ (ನೊಂದ ಮಹಿಳೆಯರ ರಕ್ಷಣಾ ಯೋಜನೆ)

ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಿರುವ ಭಾರತ ದೇಶದಲ್ಲಿ ಅನೇಕ ಸಾಮಾಜಿಕ ಪಿಡುಗುಗಳ ಪೈಕಿ ಹೆಣ್ಣಿನ ಮೇಲೆ ನಿರಂತರ ಶೋಷಣೆ ಆಗುತ್ತಿರುವ ಸಂದರ್ಭಗಳೇ ಹೆಚ್ಚು. ಈ ದಬ್ಬಾಳಿಕೆ ಶೋಷಣೆಗಳನ್ನು ತಡೆಗಟ್ಟಲು ಶ್ರೀ ಮೈತ್ರಿ ಸಂಸ್ಥೆಯ ಆಶ್ರಯಕೋರಿ ನೊಂದುಬಂದ ಮಹಿಳೆಯರ ರಕ್ಷಣಾ ಯೋಜನೆಯ “ಸ್ವಾಧಾರ ಗೃಹ” ಕೇಂದ್ರವನ್ನು 2006–07ನೇ ಸಾಲಿನಲ್ಲಿ ಪ್ರಾರಂಭಿಸಿ, ಮಹಿಳೆಯರ ಸಬಲೀಕರಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತದೆ. ನೊಂದ ಮಹಿಳೆಯರಿಗೆ ಅಗತ್ಯವಿರುವ ಆಶ್ರಯ, ರಕ್ಷಣೆ, ಪುನರ್ವಸತಿ ಕಲ್ಪಿಸುವ ಕಾಯಕದಲ್ಲಿ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದು ಈ ವರೆಗೆ 753 ಫಲಾನುಭವಿಗಳಿಗೆ ಆಶ್ರಯ ನೀಡಿ ಸೌಲಭ್ಯಗಳನ್ನು ಒದಗಿಸಿರುತ್ತದೆ.

ಸ್ವಾಧಾರ ಗೃಹದಲ್ಲಿ ನುರಿತ, ತರಬೇತಿ ಪಡೆದ ಹಾಗೂ ಅನುಭವವುಳ್ಳ, ಕಾಯಕವೇ ಕೈಲಾಸವೆಂದು ನಂಬಿರುವ ಸಿಬ್ಬಂದಿ ವರ್ಗದವರು ಕಾಯಾ, ವಾಚಾ, ಮನಸಾಕ್ಷಿಯಾಗಿ ನಿಸ್ವಾರ್ಥತೆಯಿಂದ ನೊಂದುಬಂದ ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿ, ಅವರ ಅವಶ್ಯಕತೆಗಳಿಗನುಗುಣವಾಗಿ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿ 24ಘಿ7 ಕಾಲವೂ ನಿರಂತರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ನೊಂದ ಬಂದ ಮಹಿಳೆಯರಿಗಾಗಿಯೇ ಇರುವ ಗೃಹದಲ್ಲಿ ವೃತ್ತಿ ಶಿಕ್ಷಣ ತರಬೇತಿ, ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಗೃಹಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ತರಬೇತಿಗಳನ್ನು ನೀಡಲಾಗುವುದು. ಈ ರೀತಿಯ ವೃತ್ತಿಪರ ತರಬೇತಿಗಳ ಮೂಲಕ ಮಹಿಳೆಯರು ಸ್ವಾಧಾರ ಗೃಹದಿಂದ ತಮ್ಮ ಕುಟುಂಬದೊಂದಿಗೆ ಪುನಃ ವಿಲೀನಗೊಂಡನಂತರ ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಹಾಗೂ ಸದರಿ ವೃತ್ತಿ ಶಿಕ್ಷಣ ತರಬೇತಿಯಿಂದಾಗಿ ಬ್ಯಾಂಕಿನಿಂದ ಆರ್ಥಿಕ ನೆರವು ಪಡೆದು ಕುಟುಂಬವನ್ನು ಸಮರ್ಥವಾಗಿ ಮುನ್ನೆಡೆಸುವ ದಿಕ್ಕಿನಲ್ಲಿ ಸಹಕಾರಿಯಾಗುತ್ತಾಳೆ. ವೃತ್ತಿ ತರಭೆತಿಯಲ್ಲಿ ತೋಡಗಿರುವ ಫಲಾನುಭವಿಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಯಶೋಗಾಥೆ : ಬದುಕಿನ ಸ್ಪೂರ್ತಿ ನೆಲೆಯೇ ಸ್ವಾಧರ

ಕು. ರಾಧ ಆದಾ ನಾನು ಪ್ರೀತಿಸಿದ ಹುಡುಗನಿಂದ ಮೋಸಹೋದ ಕಾರಣ ಕುಟಂಬದವರು ನನ್ನನ್ನು ಕುಟುಂಬದಿಂದ ಹೊರಹಾಕಿದರು. ಆಗ ನನಗೆ ಎಲ್ಲೂ ಸಹಾಯ ದೊರಕದಿದ್ದಾಗ ದಿನಾಂಕ 06/06/2015 ರಂದು ಸ್ವಾಧರ ಗೃಹ ಕೇಂದ್ರದ ಆಶ್ರಯಕ್ಕೆ ಮಹಿಳಾ ಸಹಾಯಮಾಣಿ ಮೂಲಕ ದಾಖಲಾಗಿರುತ್ತೇನೆ. ನನಗೆ ಸ್ವಾದರ ಕೇಂದ್ರದಲ್ಲಿ ಆಪ್ತಸಮಾಲೋಚನೆ ಮಾಡಿ ದೈರ್ಯ ತುಂಬಿರುತ್ತಾರೆ. ನಂತರದಲ್ಲಿ ನಾನು ಸ್ವಾದರ ಕೇಂದ್ರದಲ್ಲಿ ಇದ್ದುಕೊಂಡೇ ಬಿ,ಎಡ್ ಶಿಕ್ಷಣವನ್ನು ಮುಗಿಸಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿರುತ್ತೇನೆ. ಒಬ್ಬ ಯುವಕ ನನ್ನನ್ನು ಮದುವೆಯಾಗುವುದಾಗಿ ತಿಳಿಸಿದಾಗ ನನ್ನ ಇಚ್ಚೆಯ ಮೇರೆಗೆ ಸ್ವಾದರ ಕೇಂದ್ರದ ಸಿಬ್ಬಂದಿ ವರ್ಗದವರು ಯುವಕನ ಪೂರ್ವಾಪರ ವಿಚಾರಿಸಿ, ಯುವಕನ ಸಾಮಾಜಿಕ, ಆರ್ಥಿಕ ನೆಲೆಯಲ್ಲಿ ವಿಚಾರಣೆ ನಡೆಸಿ ದಿನಾಂಕ: 23/05/2017ರಂದು ಶಿವಮೊಗ್ಗದ ಗುಡ್ಡೇಕಲ್ ದೇವಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅನುಮತಿಯೊಂದಿಗೆ, ಮಹಿಳಾ ಸಾಂತ್ವಾನ ಕೇಂದ್ರ, ಮತ್ತು ಆರಕ್ಷಕರ ಸಮ್ಮುಖದಲ್ಲಿ ಮದುವೆ ಮಾಡಿಸಿರುತ್ತಾರೆ. ಹಾಗೂ ನನ್ನ ಮದುವೆಯನ್ನು ನೊಂದಣಿ ಮಾಡಿಸಲಾಗಿರುತ್ತದೆ. ಈಗ ನಾನು ನನ್ನ ಪತಿಯೊಂದಿಗೆ ಸಂತೋಷದಿಂದ ಜೀವನ ನಡೆಸುತ್ತಿದ್ದೇನೆ. ನನ್ನ ಜೀವನ ರೂಪಿಸಿಕೊಳ್ಳಲು ಆಶ್ರಯ ನೀಡಿ ಸಹಾಯ ಮಾಡಿದ ಶಿವಮೋಗ್ಗ ಸ್ವಾದರ ಕೇಂದ್ರದ ಸಿಬ್ಬಂದಿಗಳಿಗೆ ಹಾಗೂ ಸಂಸ್ಥೆಯ ಮಾಲಿಕರಿಗೆ ನಾನು ಋಣಿಯಾಗಿರುತ್ತೇನೆ.

ಕು.ರಾಧ
ಫಲಾನುಭವಿ

ಅಭಿಪ್ರಾಯ :

ದಿನಾಂಕ:24.06.2011ರ ಶುಕ್ರವಾರದಂದು ಚೈಲ್ಡ್ ಲೈನ್ ತಂಡದ ಸದಸ್ಯರಾದ ನಾವುಗಳು ಸುರಭಿ ಆಶ್ರಯಧಾಮಕ್ಕೆ ಭೇಟಿ ನೀಡಿದೆವು. ಈ ಆಶ್ರಯಧಾಮದಲ್ಲಿ ತೊಂದರೆಯಲ್ಲಿರುವ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಉಚಿತವಾಗಿ ಬಟ್ಟೆ, ಆಹಾರ, ವಿದ್ಯಾಭ್ಯಾಸ ನೀಡುತ್ತಿರುವ ವಿಚಾರವನ್ನು ಗಮನಿಸಿದೆವು. ಈ ಕೇಂದ್ರದಲ್ಲಿ ಮಾತೃ ಸಂಸ್ಥೆಯವರು ಮಾಡುತ್ತಿರುವ ಕಾರ್ಯಕ್ರಮಗಳನ್ನು ಗಮನಿಸಿದ ನಮಗೆ ತುಂಬ ಸಂತೋಷವಾಯಿತು. ಇದೇ ರೀತಿಯಾಗಿ ಕೇಂದ್ರದ ಸಿಬ್ಬಂದಿ ಮತ್ತು ಸಂಸ್ಥೆಯ ಯಜಮಾನರು ನೊಂದ ಬಂದ ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚಿನ ಸೌಲಭ್ಯವನ್ನು ನೀಡುವ ಶಕ್ತಿಯನ್ನು ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೆವೆ.

ಸದಾಶಿವ-ಸರೋಜ .ಹೆಚ್.-ರೋಜಿನಾ
ಟೀಮ್ ಮೆಂಬರ್ಸ್,
ಚೈಲ್ಡ್ ಲೈನ್-1098, ಶಿವಮೊಗ್ಗ.